ಮೆಡಿಸಿ -
 	ಸು. 1400 ರಿಂದ 1700ರ ತನಕ ಇಟಲಿ ಮತ್ತು ಫ್ರಾನ್ಸ್ ದೇಶಗಳ ಚರಿತ್ರೆಯ ಮೇಲೆ ಹೆಚ್ಚು ಪ್ರಭಾವ ಬೀರಿದ ಫ್ಲಾರೆನ್ಸಿನ ಒಂದು ಪ್ರಸಿದ್ಧ ಮನೆತನ. ಈ ಮನೆತನದ ಮೂಲಪುರುಷ ಮೆಸಿಡೋನಿಯದ ಒಬ್ಬ ಅರಸನೆಂದು ಹೇಳುವರು. ಫ್ಲಾರೆನ್ಸನ್ನು 1737ರ ತನಕ ಅಳಿದ ಇವರು ಕಲಾಪ್ರೇಮಿಗಳಾಗಿದ್ದರು. ಮೈಕಲೇಂಜಲೋ ಮತ್ತು ರಾಫೇಲ್ ಎಂಬ ಪ್ರಸಿದ್ಧ ಕಲಾವಿದರು ಮೆಡಿಸಿ ಮನೆತನದವರಿಂದಲೇ ಪ್ರೋತ್ಸಾಹ ಪಡೆದದ್ದು. ಈ ಮನೆತನ ಗಿಯೊವನ್ನಿ ಡಿ ಮೆಡಿಸಿಯ ಕಾಲದಲ್ಲಿ ಹೆಚ್ಚು ಪ್ರಸಿದ್ಧವಾಯಿತು. ಈತ ವ್ಯಾಪಾರ ವೃತ್ತಿಯಲ್ಲಿ ಸಾಕಷ್ಟು ಹಣಗಳಿಸಿ ಇಟಲಿ ಹಾಗೂ ಸುತ್ತಲ ಹೊರದೇಶಗಳಲ್ಲಿ ಬ್ಯಾಂಕುಗಳನ್ನು ಸ್ಥಾಪಿಸಿದ. ಸಣ್ಣಪುಟ್ಟ ವೃತ್ತಿಸಂಘಗಳ ಪೋಷಕನಾಗಿದ್ದ. ಹೆಚ್ಚಿನ ತೆರಿಗೆ ಧನಿಕರ ಮೇಲೆ ಬೀಳುವಂತೆ ಅರ್ಥಿಕನೀತಿ ನಿರೂಪಿಸಿದ. 1429ರಲ್ಲಿ ಈತ ನಿಧನನಾದ. ಈತನಿಗೆ ಕಾಸಿಮೋ ಡಿ ಮೆಡಿಸಿ ಮತ್ತು ಲೊರೆಂಜೊ ಡಿ ಮೆಡಿಸಿ ಎಂಬಿಬ್ಬರು ಮಕ್ಕಳಿದ್ದರು.

ಕಾಸಿಮೋ : 1389 - 1464. ಈತನನ್ನು ಕಾಸಿಮೋ ದಿ ಎಲ್ಡರ್ ಎಂದೂ ಕರೆಯುತ್ತಾರೆ. ಸಾಹಿತ್ಯ ಮತ್ತು ಕಲಾಪ್ರಿಯ. ಹಿರಿಯರಂತೆ ವ್ಯಾಪಾರದಿಂದ ಅಪಾರ ಸಂಪತ್ತು ಗಳಿಸಿದ. ಕಲೆಗೆ ಅಪಾರ ಪ್ರೋತ್ಸಾಹ ನೀಡಿದ. ಫ್ಲಾರೆನ್ಸಿನಲ್ಲಿ ಈತನಿಗೆ ಅಪಾರ ಗೌರವವಿದ್ದು ಇವನನ್ನು ದೇಶದ ಪಿತ ಎಂದು ಸಂಬೋಧಿಸುತ್ತಿದ್ದರು. ಈತ 1464ರಲ್ಲಿ ತೀರಿಕೊಂಡ. ಈತನ ಅನಂತರ ಪೀರೊ ಎಂಬಾತ ಅಧಿಕಾರಕ್ಕೆ ಬಂದ. ಐದು ವರ್ಷಗಳ ತನಕ (1464--69) ಇಟಲಿಯಲ್ಲಿ ಅಧಿಕಾರ ಮಾಡಿ 1469ರಲ್ಲಿ ಮರಣ ಹೊಂದಿದ.    

	ಲೊರೆಂಜೊ ದಿ ಮೆಗ್ನಿಫಿಸೆಂಟ್ : (ನೋಡಿ- ಮೆಡಿಸಿ,-ಲೊರೆನ್ಜೊ)

	ಡ್ಯೂಕ್ ಅಲೆಸ್ಸ್ಯಾಂಡ್ರೊ : ಈತನ ಕಾಲದಲ್ಲಿ ಮೆಡಿಸಿ ಕುಟುಂಬ ಫ್ಲಾರೆನ್ಸಿನ ಮೇಲಿನ ಅಧಿಕಾರ ಕಳೆದುಕೊಂಡಿತು. ಮತ್ತೆ 1527ರಲ್ಲಿ ಸ್ಪೇನಿನ ಅರಸ ಐದನೆಯ ಚಾಲ್ರ್ಸನಿಂದ ಈ ಅಧಿಕಾರವನ್ನು ಮರಳಿ ಪಡೆದುಕೊಂಡಿತು. ಚಾಲ್ರ್ಸ್, ಅಲೆಸ್ಸ್ಯಾಂಡ್ರೊ ಡಿ ಮೆಡಿಸಿಯನ್ನು ಫ್ಲಾರೆನ್ಸಿನ ಅನುವಂಶಿಕ ಅರಸನಾಗಿ ನೇಮಿಸಿದ. ಕೆಲವು ಕಾಲಾನಂತರ ಅಲೆಸ್ಸ್ಯಾಂಡ್ರೊ ತನ್ನ ದೂರದ ಸಂಬಂಧಿಕನೊಬ್ಬನಿಂದ ಕೊಲ್ಲಲ್ಪಟ್ಟ. ಈತನ ಮರಣದೊಂದಿಗೆ ಮೆಡಿಸಿ ಮನೆತನದ ಹಿರಿಯ ಶಾಖೆ ಕೊನೆಗೊಂಡಂತಾಯಿತು.  

	ಅನಂತರ ಕಾಸಿಮೋ ಎಂಬಾತ ತನ್ನ 17ನೆಯ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದ. ಈತ 37 ವರ್ಷಗಳ ದೀರ್ಘಾವಧಿ ಆಳ್ವಿಕೆಯ ಅನಂತರ 1574ರಲ್ಲಿ ಮರಣ ಹೊಂದಿದ. ಈತ ಸುಂದರನೂ ಉತ್ತಮ ವಾಗ್ಮಿಯೂ ಅಗಿದ್ದ. ಮುಂದೆ ನಿರಂಕುಶ ಪ್ರಭುವೂ ಸಾಹಿತ್ಯ ಮತ್ತು ವಿಜ್ಞಾನದಲ್ಲಿ ಅತ್ಯಂತ ಅಭಿರುಚಿಯುಳ್ಳವನೂ ಆಗಿದ್ದ ಫ್ರಾನ್ಸಿಸ್ಕೊ ಎಂಬಾತ ರಾಜ್ಯಭಾರ ಮಾಡಿ 1587ರಲ್ಲಿ ತೀರಿಕೊಂಡ. 

	ಮೊದಲನೆಯ ಫರ್ಡಿನಂಡ್, ದ್ವಿತೀಯ ಕಾಸಿಮೋ, ಎರಡನೆಯ ಫರ್ಡಿನಂಡ್ ಮುಂತಾದವರು ರಾಜ್ಯಭಾರ ನಡೆಸಿದರೂ ಮೆಡಿಸಿ ಕುಟುಂಬ ಮತ್ತೆ ಹಿಂದಿನ ಪ್ರಸಿದ್ಧಿಯನ್ನು ಪಡೆಯಲಿಲ್ಲ. ಕೊನೆಯ ಗಿಯೊವಾನಿ ಗಸ್ಟೋನ್‍ನ (1737) ಮರಣದೊಂದಿಗೇ ಮೆಡಿಸಿ ಕುಟುಂಬದ ಕಿರಿಯ ಶಾಖೆಯೂ ಕೊನೆಗೊಂಡಿತು.  						
 (ಎಸ್.ಯು.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ